ಕಾಲಮೇಘ

ಅಕ್ಯಾಂತೇಸೀ ಕುಟುಂಬಕ್ಕೆ ಸೇರಿದ ಆಂಡ್ರೊಗ್ರಾಫಿಸ್ ಪ್ಯಾನಿಕ್ಯುಲೇಟ ಎನ್ನಲಾಗುವ ಸಸ್ಯ. ಇದಕ್ಕೆ ನೆಲಬೇರು ಎಂಬ ಹೆಸರೂ ಇದೆ. ಭಾರತದ ಮೈದಾನ ಪ್ರದೇಶಗಳಲ್ಲೆಲ್ಲ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದು ಊಧ್ರ್ವಾಭಿಗಾಮಿಯಾಗಿ ಬೆಳೆಯುವ ಏಕವಾರ್ಷಿಕ ಮೂಲಿಕೆ ಸಸ್ಯ. ಎಲೆಗಳು ಸರಳವಾಗಿದ್ದು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಅವುಗಳ ಅಂಚು ಅಖಂಡ. ಹೂಗಳು ಅಂತ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳಲ್ಲಿ ಚಿಕ್ಕ ಗಾತ್ರದ ಬ್ರಾಕ್ಟ್ ಮತ್ತು ಬ್ರಾಕ್ಟಿಯೋಲುಗಳು ಇವೆ. ಪುಷ್ಪ ಪಾತ್ರೆ ಐದು ಪುಷ್ಪಗಳನ್ನೊಳಗೊಂಡಿದೆ. ಪುಷ್ಪದಳಗಳು 5. ಪರಸ್ಪರ ಕೂಡಿ ಕೊಂಡಿದ್ದು ಕೊಳವೆಯಾಕಾರದ ಪುಷ್ಪದಳ ವಲಯವಾಗಿದೆ. ಈ ವಲಯದ ಮುಂಭಾಗ ಮಾತ್ರ 2 ತುಟಿಗಳಾಗಿ ವಿಭಾಗವಾಗಿದೆ. ಕೇಸರಗಳು ಎರಡು. ಕೇಸರ ದಂಡ ಕೆಳಗಡೆ ಮತ್ತು ಮಧ್ಯದಲ್ಲಿ ಅಗಲವಾಗಿದೆ. ಪರಾಗಕೋಶದಲ್ಲಿ ಎರಡು ಕೋಣೆಗಳಿವೆ. ಪರಾಗಕೋಶದ ಕೆಳಗಡೆ ಬಿಳಿ ಕೂದಲಿನ ಗಡ್ಡದಂಥ ರಚನೆಗಳಿವೆ. ಅಂಡಾಶಯ ಉಚ್ಚಸ್ಥಾನದ್ದು; ಎರಡು ಕೋಣೆಗಳನ್ನೊಳಗೊಂಡಿದ್ದು ಪ್ರತಿಯೊಂದರಲ್ಲಿ 2-6 ಅಂಡಕಗಳಿವೆ. ಫಲ ಸಂಪುಟ ಮಾದರಿಯದು. ಕಾಯಿಯ ಒಳಗೆ ಬೀಜ ಪ್ರಸಾರಕ್ಕೆ ಸಹಾಯಕವಾಗುವ ರೆಟಿನ್ಯಾಕುಲ ಎಂಬ ರಚನೆಗಳಿವೆ.

ಕಾಲಮೇಘ ಔಷಧೀಯದೃಷ್ಟಿಯಿಂದ ಪ್ರಮುಖವಾಗಿದೆ. ರುಚಿ ಕಹಿ, ಎಲೆಗಳಿಂದ ದೊರೆಯುವ ಹೊಸ ರಸವನ್ನು ಏ¯ಕ್ಕಿ, ಲವಂಗ, ದಾಲ್ಚಿನ್ನಿಗಳೊಂದಿಗೆ ಸೇರಿಸಿ ಒಣಗಿಸಿ ಗುಳಿಗೆಗಳಾಗಿ ಮಾಡಿ ಚಿಕ್ಕ ಮಕ್ಕಳ ಹೊಟ್ಟೆನೋವಿಗೆ ಔಷಧಿಯಾಗಿ ಕೊಡುತ್ತಾರೆ. ಒಣಗಿಸಿದ ಕಾಂಡ ಮತ್ತು ಬೇರುಗಳಿಂದ ದೊರೆಯುವ ರಸ ಅಪಚನ ರೋಗ ಮತ್ತು ಇನ್‍ಫ್ಲುಯೆಂಜû ಚಿಕಿತ್ಸೆಗಳಲ್ಲಿ ಉಪಯೋಗವಾಗುತ್ತದೆ. ಇದಕ್ಕೆ ಜ್ವರವನ್ನು ತಗ್ಗಿಸುವ ಗುಣವೂ ಇದೆ. ಆಮಶಂಕೆ ಮತ್ತು ಮಲೇರಿಯ ರೋಗ ಚಿಕಿತ್ಸೆಗಳಲ್ಲೂ ಈ ಸಸ್ಯದ ಪಾತ್ರ ಹಿರಿದು.

(ಪಿ.ಕೆ.ಆರ್.ಜಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ